ಮಲ್ಲಿಗೆಯಲ್ಲಿ ಭಾವ ಕರ್ನಾಟಕ
ವರದಿ: ಪೂರ್ಣಿಮ ಸುಬ್ರಹ್ಮಣ್ಯ, ಅರ್ವಿಂಗ್.
ಕಳೆದ ಶುಕ್ರವಾರ ಸೆಪ್ಟೆಂಬರ್ ೧೯ರ ಸಂಜೆ, ಡಾಲ್ಲಸ್ ನಗರದ ಮಲ್ಲಿಗೆ ಕನ್ನಡ ಸಂಘವು ’ಆಲ್ಲನ್ ಲೈಬ್ರರಿ ಆಡಿಟೋರಿಯಮ್’ನಲ್ಲಿ ಕಾಸರವಳ್ಳಿ ಸಹೋದರಿಯರೆಂದೇ ಚಿರಪರಿಚಿತವಾಗಿರುವ ರೂಪ-ದೀಪ ಅವರಿಂದ ಕರ್ನಾಟಕ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ಅಧ್ಯಕ್ಷ ಸುಧೀಂದ್ರ ಪ್ರಹ್ಲಾದನ್ ಅವರು ಗಾಯಕಿಯರನ್ನು, ಸಭಿಕರನ್ನು ಸ್ವಾಗತಿಸಿದರು. ಸುಮ ಕೃಷ್ಣಪ್ರಸಾದ್ ಅವರು ಗಾಯಕಿಯರ ಪರಿಚಯ ಮಾಡಿಕೊಟ್ಟ ನಂತರ ’ಭಜಮಾನಸ ವಿಘ್ನೇಶ್ವರ’ (ಭೋಗಾದಿ ರಾಗ, ಆದಿತಾಳ) ಕೃತಿಯೊಂದಿಗೆ ಕಛೇರಿ ಆರಂಭವಾಯಿತು. ನಂತರ ಮರುಗೇಲರಾ, ನಾರಾಯಣಾ ನಿನ್ನ ನಾಮದ ಸ್ಮರಣೆಯ, ಢಂಗುರವ ಸಾರಿರಯ್ಯ, ಮೇರುಸಮಾನಂ, ಹರಿಕಥಾ ಶ್ರವಣ, ಎಂತ ಮುದ್ದೋ ಎಂತ ಸೊಗಸು, ನಿನ್ನನೇ ಪಾಡುವೆ, ಕಂಡೆನಾ ಗೋವಿಂದನಾ ಮುಂತಾದ ಕೀರ್ತನೆ ಹಾಗೂ ದೇವರನಾಮಗಳಿಂದ ಸಭಿಕರ ಮನರಂಜಿಸಿದರು. ವಿಜಯದಾಸರ ’ಹರಿಕಥಾ ಶ್ರವಣ ಮಾಡೋ, ಹರಿಪದ ವೈಕುಂಠ ನೋಡೋ’(ರೀತಿಗೌಳ ರಾಗ, ಆದಿತಾಳ) ಪ್ರಸ್ತುತಿಯಲ್ಲಿ ವಿಸ್ತಾರವಾದ ಆಲಾಪನೆ ಹಾಗೂ ಪಾಂಡವಪ್ರಿಯ ರಾಗದ ’ಕಂಡೆನಾ ಗೋವಿಂದನ’ ಕೃತಿಯಲ್ಲಿ ಸುಂದರ ಸ್ವರಪ್ರಸ್ತಾರದಿಂದ ತಮ್ಮ ವಿದ್ವತ್ತನ್ನು ಸಭಿಕರಿಗೆ ಪರಿಚಯಿಸಿದರು.
ಅಲ್ಪ ವಿರಾಮದ ನಂತರ "ಮಬ್ಬು ಹರಿದು ಬೆಳಕು ಸುರಿದು’(ರಚನೆ: ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ) ಗೀತೆಯೊಂದಿಗೆ ಸಭೆಯಲ್ಲಿ ಭಾವರಸ ಸಂಚಾರ. ಅಮ್ಮಾ ನಿಮ್ಮ ಮನೆಗಳಲ್ಲಿ ಕಂಡಿರೇನು ಕಂದನಾ(ರಂ.ಶ್ರೀ.ಮುಗಳಿ), ಕನಸ ಮಾರುವ ಚೆಲುವ(ಕೆ.ಸಿ.ಶಿವಪ್ಪ) ಮುಂತಾದ ಗೀತೆಗಳ ಭಾವಪೂರ್ಣ ಗಾಯನ ಸುಗಮ ಸಂಗೀತ ಪ್ರೇಮಿಗಳಿಗೆ ಖುಷಿಕೊಟ್ಟಿತು. ’ಗೋವಿಂದಾ ಮುರಹರ ಗೋವಿಂದ’ ಜನಪದ ಗೀತೆ ತನ್ನ ವೇಗ ಹಾಗೂ ಎರಡು ಕಂಠಗಳ ವೈವಿಧ್ಯಗಳಿಂದ ಸೊಗಸಾಗಿತ್ತು. ನಾನು ನೀನು ಎನ್ನದಿರು ಹೀನ ಮಾನವ, ಕೃಷ್ಣಾ ನೀ ಬೇಗನೆ ಬಾರೋ, ಝೂಲತ್ ರಾಧಾ ಸಂಗ್ ಗಿರಿಧರ್(ಮೀರಾ ಭಜನೆ) ಹಾಗೂ ತಿಲ್ಲಾನದಿಂದ ಸಂಗೀತ ವೈವಿಧ್ಯ ಉಣಬಡಿಸಿದರು. ಗೋಪ ಗೋಪೀ ಸುತಗೆ ಮಂಗಳ ಹಾಡುವುದರೊಂದಿಗೆ ಕಛೇರಿ ಮುಕ್ತಾಯವಾಯಿತು. ವೀಣಾ ಗೋವಿಂದರಾಜ್ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮದ ಸಭಾಕಾಲ ಮುಗಿಯಿತು. ಹೊರಗೆ ಅಂಗಳದಲ್ಲಿ ಗಾಯಕಿಯರನ್ನು ಮಾತಾಡಿಸಿ, ಫೋಟೋ ತೆಗೆಸಿಕೊಳ್ಳಲು ಸಾಕಷ್ಟು ಜನ ಉತ್ಸುಕರಾಗಿದ್ದರು.
ಅವಳಿ ಸಹೋದರಿಯರ ಇಂಪಾದ ಶಾರೀರದೊಡನೆ ಪಕ್ಕವಾದ್ಯಗಳೂ ಮೇಳೈಸಿದ್ದರೆ ಕಾರ್ಯಕ್ರಮವು ಇನ್ನೂ ಹೆಚ್ಚು ಕಳೆಗಟ್ಟುತ್ತಿತ್ತು.
ಶಿವಮೊಗ್ಗೆಯ ತೀರ್ಥಹಳ್ಳಿಯಲ್ಲಿ ತಮ್ಮ ತಾಯಿ ಶಕುಂತಲ ಅವರಿಂದ ಸಂಗೀತದ ಓಂಕಾರ ಕಲಿತ ರೂಪ ದೀಪ ನಂತರ ತಮ್ಮ ಸಂಗೀತಾಭ್ಯಾಸವನ್ನು ವಿದ್ವಾನ್ ಮದೂರ್ ಬಾಲಸುಬ್ರಮಣ್ಯ, ವಿದ್ವಾನ್ ಕೆ.ಜಿ.ರಾಮಸ್ವಾಮಿ, ವಿದುಷಿ ಸೀತಾಲಕ್ಷ್ಮಿ ವೆಂಕಟೇಶನ್ ಮತ್ತು ವಿದ್ವಾನ್ ಲಾಲ್ಗುಡಿ ಜಯರಾಮನ್‍ನಲ್ಲಿ ಮುಂದುವರಿಸಿದರು. ಈಗ ವಿದುಷಿ ನೀಲಾ ರಾಮಗೋಪಾಲ್‍ರಲ್ಲಿ ಮತ್ತಷ್ಟು ಅಭ್ಯಾಸ ನಡೆಸಿರುವ ಇವರು, ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತ ಎಮ್.ಎ. ಪದವಿಯಲ್ಲಿ ರ್‍ಯಾಂಕ್ ವಿಜೇತರು. ಭಾರತದೆಲ್ಲೆಡೆ ತಮ್ಮ ಸಂಗೀತದಿಂದ ಮನೆ ಮಾತಾಗಿರುವ ಕಾಸರವಳ್ಳಿ ಸಹೋದರಿಯರು ಅಕಾಶವಾಣಿಯಲ್ಲಿ ’ಎ’ ಗ್ರೇಡ್ ಕಲಾವಿದರು. ಇವರು ಯು.ಕೆ., ಯು.ಎ.ಇ. ಹಾಗೂ ಸಿಂಗಪೂರ್‍ಗಳಲ್ಲಿ ಹಾಡಿದ್ದು ತಮ್ಮ ಪ್ರಥಮ ಅಮೆರಿಕ ಪ್ರವಾಸದಲ್ಲಿದ್ದಾರೆ. ಶಿಕಾಗೋದ ಅಕ್ಕ ಸಮ್ಮೇಳನ, ಸನ್ನಿವೇಲ್, ಬಫ಼ೆಲೋ, ನ್ಯೂಯಾರ್ಕ್, ನ್ಯೂಜೆರ್ಸಿ, ಡಾಲ್ಲಸ್, ಅಟ್ಲಾಂಟಗಳಲ್ಲಿ ಕಾರ್ಯಕ್ರಮಗಳಿವೆ.
ಇದೇ ಸಂದರ್ಭದಲ್ಲಿ ಶಿಕಾಗೋನಲ್ಲಿ ನಡೆದ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಲ್ಲಿಗೆ ಸಂಘದ ಪರವಾಗಿ ನಾಟಕ ಮತ್ತು ಸಂಪ್ರದಾಯ ಗೀತೆಗಳನ್ನು ಪ್ರಸ್ತುತಪಡಿಸಿದ ವಿದ್ಯಾ ದತ್ತ (ವಿದ್ಯಾ, ದತ್ತಪ್ರಸಾದ್, ಪದ್ಮ, ಸುಬ್ರಹ್ಮಣ್ಯ) ತಂಡದವರನ್ನು ಅಭಿನಂದಿಸಲಾಯಿತು. ಹಾಗೂ ಪೂರ್ವಯೋಜನೆಯಂತೆ ನಾರ್ತ್ ಟೆಕ್ಸಾಸ್ ಫ಼ುಡ್ ಬ್ಯಾಂಕ್‍ಗಾಗಿ ಹಲವಾರು ಫ಼ುಡ್ ಕ್ಯಾನ್‍ಗಳನ್ನು ಸಂಗ್ರಹಿಸಲಾಯಿತು.
ಇಂತಹ ಒಂದು ಸದಭಿರುಚಿಯ ಕಾರ್ಯಕ್ರಮವನ್ನು ನಡೆಸಲು ಕಾರಣರಾದ ಎಲ್ಲ ಪ್ರಾಯೋಜಕರಿಗೂ(ತೇಜರಾಜನ್, ಶ್ರೀವತ್ಸ ರಾಮನಾಥನ್, ರಾಮ್ ಸಿ. ರಾವ್, ರಮೇಶ್ ಮೇಲ್ಕೋಟೆ, ಕಲ್ಪನಾ ಮೂರ್ತಿ) ಮಲ್ಲಿಗೆ ಕನ್ನಡ ಸಂಘವು ಆಭಾರಿಯಾಗಿದೆ. ಎಲ್ಲಾ ಕಾರ್ಯಕರ್ತರಿಗೂ, ಸ್ವಯಂಸೇವಕರಿಗೂ ಮತ್ತು ಎಲ್ಲಾ ಸಭಿಕರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕನ್ನಡದ ಕಂಪನ್ನು ಹರಡಬೇಕಾಗಿ ಕೋರಿಕೆ. ಕಾರ್ಯಕ್ರಮದ ವಿವಿಧ ಕ್ಷಣಗಳನ್ನು ದಾಖಲಿಸಿದ ಕೃಷ್ಣಮೂರ್ತಿಗಳ ಕ್ಯಾಮರಾ ಕಣ್ಚಳಕ ಇಲ್ಲಿ ಕಾಣಬಹುದು.